ಪೆಂಫಿಗಸ್ 
ದೀರ್ಘಕಾಲಿಕ ಹಾಗೂ ಪ್ರಾಣಾಂತಿಕ ಚರ್ಮರೋಗ.  ಮೈ ಮೇಲಿನ ಚರ್ಮ ಮತ್ತು ಒಳಗಿನ ಲೋಳೆಪೊರೆ (ಮ್ಯೂಕಸ್ ಮೆಂಬ್ರೇನ್) ಮೇಲೆ ರಸಿಕೆ ತುಂಬಿದ ಬೊಬ್ಬೆಗಳು, ದೊಡ್ಡ ಗುಳ್ಳೆಗಳೇಳುವುದು ಈ ರೋಗದ ಪ್ರಧಾನ ಲಕ್ಷಣ. ಬೊಬ್ಬೆಗಳು ಒಡೆದು ಹೆಕ್ಕಳಿಕೆ ಕಟ್ಟುವುವು.  ಬೊಬ್ಬೆಗಳಿಂದ (ಹೆಕ್ಕಳಿಕೆಯಿಂದ) ರೋಗಿಗೆ ವಿಶೇಷ ತೊಂದರೆಯಾಗದು. ಆದರೆ ಹೆಕ್ಕಳಿಕೆಗಳ ತಳದಲ್ಲಿ ಸೇರಬಹುದಾದ ಅನ್ಯಕ್ರಿಮಿಗಳ ಬೆಳವಣಿಗೆಯಿಂದ ಉದ್ಭವಿಸುವ ರೋಗಗಳಿಂದ ರೋಗಿ ಮೃತನಾಗಬಹುದು.
ಪೆಂಫಿಗಸ್‍ನಲ್ಲಿ ನಾಲ್ಕು ಬಗೆಗಳಿವೆ. ಯಾವ ಮುನ್ಸೂಚನೆಯೂ ಇಲ್ಲದೇ ಇದ್ದಕ್ಕಿದ್ದಂತೆ ಹೊಮ್ಮುವ ಬಗೆ ತೀವ್ರರೀತಿಯದು.  ಪೆಂಫಿಗಸ್ ಸಾಮಾನ್ಯವಾಗಿ ಮಧ್ಯವಯಸ್ಸಿನವರಲ್ಲಿ ಕಾಣಬರುತ್ತದೆ.  ಈ ರೋಗಕ್ಕೆ ಕಾರಣ ಏನೆಂದು ಇನ್ನೂ ಪತ್ತೆ ಹಚ್ಚಲಾಗಿಲ್ಲ.  ಸ್ಟೆಫಿಲೊಕಾಕೈ ಬ್ಯಾಕ್ಟೀರಿಯಗಳಿಂದ ಉಂಟಾಗುವ ಬೊಬ್ಬೆಗಳನ್ನೂ ಸಿಫಿಲಿಸ್ ರೋಗದಲ್ಲಿ ಕಾಣಬರುವ ಬೊಬ್ಬೆಗಳನ್ನೂ ಪೆಂಪಿಗಸ್ ರೋಗದ ಲಕ್ಷಣಗಳೆಂದು ತಪ್ಪಾಗಿ ತಿಳಿಯುವ ಸಂಭವವಿದೆಯಾಗಿ ಇದರ ರೋಗನಿದಾನದಲ್ಲಿ ಎಚ್ಚರಿಕೆ ವಹಿಸಬೇಕು.
ಕಾರ್ಟಿಕೋಸ್ಟೀರಾಯ್ಡ್ ಮದ್ದುಗಳ ಬಳಕೆಯಿಂದ ಪೆಂಫಿಗಸ್ಸನ್ನು ನಿಯಂತ್ರಿಸಬಹುದು.
(ಕೆ.ಎಂ.ಆರ್.; ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ